ದೇವನಹಳ್ಳಿ
ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ.  ತಾಲ್ಲೂಕು ಬೆಂಗಳೂರು ಜಿಲ್ಲೆಯ ಈಶಾನ್ಯ ಭಾಗದಲ್ಲಿ ಉ. ಅ. 130 5' - 130 22' ಮತ್ತು ಪೂ. ರೇ. 770 32' - 770 50 ' ನಡುವೆ ಇದೆ. ಇದರ ಉತ್ತರಕ್ಕೆ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕು, ಈಶಾನ್ಯಕ್ಕೆ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು, ಪೂರ್ವ ಮತ್ತು ಆಗ್ನೇಯಕ್ಕೆ ಹೊಸಕೋಟೆ ತಾಲ್ಲೂಕು, ದಕ್ಷಿಣಕ್ಕೆ ಹೊಸಕೋಟೆ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳು, ನೈಋತ್ಯ, ಪಶ್ಚಿಮ ಮತ್ತು ವಾಯುವ್ಯಕ್ಕೆ ಉತ್ತರ ಬೆಂಗಳೂರು ಮತ್ತು ದೊಡ್ಡ ಬಳ್ಳಾಪುರ ತಾಲ್ಲೂಕುಗಳು ಇವೆ.  ದಕ್ಷಿಣ ಪಿನಾಕಿನಿ ನದಿ ಈ ತಾಲ್ಲೂಕನ್ನು ಹೊಸಕೋಟೆ ತಾಲ್ಲೂಕಿನಿಂದ ಬೇರ್ಪಡಿಸುತ್ತದೆ.  ತಾಲ್ಲೂಕಿನ ವಿಸ್ತೀರ್ಣ 597.2 ಚ. ಕಿ.ಮೀ. ಜನಸಂಖ್ಯೆ 1,84,872 (2001).

ದೇವನಹಳ್ಳಿ ತಾಲ್ಲೂಕಿನ ಮೇಲ್ಮೈ ಸಾಮಾನ್ಯವಾಗಿ ಅಲೆಯಲೆಯಾಗಿ ಏರಿಳಿಯುತ್ತದೆ.  ಕಣಿವೆಗಳು ಫಲವತ್ತಾಗಿದ್ದು ಸಾಗುವಳಿಗೆ ಒಳಪಟ್ಟಿವೆ.  ಎತ್ತರ ಪ್ರದೇಶಗಳು ಸಣ್ಣ ಪುಟ್ಟ ಮರಗಳಿಂದ ಕೂಡಿವೆ.  ಉತ್ತರ ಮತ್ತು ಪಶ್ಚಿಮದಲ್ಲಿ ಕೆಲವು ಸಣ್ಣ ಬೆಟ್ಟಗಳೂ ಬಂಡೆಗಳೂ ಉಂಟು.  ಆದರೂ ಒಟ್ಟಿನಲ್ಲಿ ಈ ತಾಲ್ಲೂಕು ಮೈದಾನ ಪ್ರದೇಶ.  ತಾಲ್ಲೂಕಿನ ನೆಲ ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ.  ವಾಯುವ್ಯ ಮೂಲೆಯಲ್ಲಿರುವ ದಿಬ್ಬಗೆರೆ ಬೆಟ್ಟ ಈ ತಾಲ್ಲೂಕಿನ ಅತ್ಯಂತ ಎತ್ತರವಾದ (1,173 ಮೀ.) ಪ್ರದೇಶ. ದಕ್ಷಿಣದಲ್ಲಿ ಬೆಟ್ಟಹಲಸೂರು ಒಂದುಮುಖ್ಯ ಬೆಟ್ಟ.

ತಾಲ್ಲೂಕಿನ ಎಲ್ಲ ಭಾಗಗಳಲ್ಲಿ ಸಾಮಾನ್ಯವಾಗಿ ಗ್ರಾನೈಟಿಕ್ ನೈಸ್ ಶಿಲೆ ಇದೆ. ಆದರೆ ಅದು ರಚನೆ, ವಿನ್ಯಾಸ ಮತ್ತು ರೂಪುಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ.  ಲ್ಯಾಟರೈಟ್ ಶಿಲೆಯೂ ಉಂಟು.  ಗ್ರಾನೈಟಿಕ್ ನೈಸ್ ಬಂಡೆಗಳಿಂದ ಕಟ್ಟಡಗಳಿಗೆ ಉಪಯುಕ್ತವಾದ ಉತ್ತಮ ಕಲ್ಲುಚಪ್ಪಡಿಗಳು ದೊರೆಯುತ್ತವೆ.  ಬೆಂಗಳೂರು ವಿಧಾನಸೌಧವನ್ನು ಕಟ್ಟಲು ಬೆಟ್ಟಹಲಸೂರಿನ ಚಪ್ಪಡಿಗಲ್ಲುಗಳನ್ನೂ ಬಳಸಲಾಗಿದೆ.  ಇದರ ಬಳಿಯ ಕೊಯಿರ ಬೆಟ್ಟ ಚಪ್ಪಡಿ ಗಲ್ಲುಗಳಿಗೆ ಪ್ರಸಿದ್ಧವಾಗಿದೆ.  ಇಲ್ಲಿಂದ ಚಪ್ಪಡಿಗಲ್ಲುಗಳನ್ನು ಪರದೇಶಗಳಿಗೆ ರಫ್ತು ಮಾಡುತ್ತಾರೆ.  ಗ್ರಾನೈಟ್ ಮತ್ತು ಲ್ಯಾಟರೈಟ್ ಶಿಲೆಗಳ ಚೂರುಗಳನ್ನು ರಸ್ತೆಗೆ ಜಲ್ಲಿಕಲ್ಲಾಗಿ ಉಪಯೋಗಿಸುತ್ತಾರೆ.  ಈ ತಾಲ್ಲೂಕಿನಲ್ಲಿ ಮಣ್ಣು ಸಾಮಾನ್ಯವಾಗಿ ಫಲವತ್ತಾಗಿದ್ದು, 1 ರಿಂದ 3 ಮೀ. ಆಳವಾಗಿದೆ.  ಈ ತಾಲ್ಲೂಕಿನ ಮಧ್ಯದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಯ ಪೂರ್ವಕ್ಕೆ ಕೆಂಪು ಲ್ಯಾಟರೈಟಿಕ್ ಮಣ್ಣು ಮತ್ತು ಪಶ್ಚಿಮಕ್ಕೆ ಫಲವತ್ತಾದ ಜೇಡಿಮಿಶ್ರಿತ ಮರಳುಮಯ ಮಣ್ಣು ಇವೆ.

ದೇವನಹಳ್ಳಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ದಕ್ಷಿಣೋತ್ತರವಾಗಿ ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಜಲವಿಭಾಜಕವಿದೆ.  ಪೂರ್ವ ಭಾಗ ದಕ್ಷಿಣ ಪಿನಾಕಿನಿ ನದಿಯಜಲಾನಯನ ಪ್ರದೇಶ.  ಈ ನದಿಗೆ ಸೇರುವ ಮುಖ್ಯ ಉಪ ನದಿಗಳಿಂದಾಗಿ ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶವನ್ನು ವಿಜಯಪುರ, ದೇವನಹಳ್ಳಿ ಮತ್ತು ಬೂದಿಗೆರೆ ಎಂಬ ಮೂರು ಉಪಜಲಾನಯನ ಪ್ರದೇಶಗಳಾಗಿ ವಿಭಾಗಿಸಬಹುದು.  ಈ ತಾಲ್ಲೂಕಿನ ಪೂರ್ವ ಮೇರೆಗುಂಟ ದಕ್ಷಿಣ ಕಡೆಗೆ ಹರಿಯುವ ದಕ್ಷಿಣ ಪಿನಾಕಿನಿ ನದಿಗೆ ಪೆನ್ನಾರ್ ಅಥವಾ ಪೊನ್ನೈಯಾರ್ ಎಂದೂ ಹೆಸರುಂಟು. ಈ ನದಿಯ ಜಲಾನಯನ ಪ್ರದೇಶದಲ್ಲಿ ಅಸಂಖ್ಯ ಕೆರೆ ಮತ್ತು ಬಾವಿಗಳಿವೆ.  ದಕ್ಷಿಣ ಭಾಗದಲ್ಲಿ ಪೂರ್ವ- ಪಶ್ಚಿಮವಾಗಿ ಹರಡಿರುವ ಕೆರೆಗಳ ಸಾಲುಂಟು. ಅಣ್ಣೇಶ್ವರದ ಹತ್ತಿರ ಇರುವುದು ಈ ತಾಲ್ಲೂಕಿನ ಅತ್ಯಂತ ದೊಡ್ಡ ಕೆರೆ.  ವಿಜಯಪುರದ ಪಶ್ಚಿಮಕ್ಕೆ ಮತ್ತೊಂದು ದೊಡ್ಡ ಕೆರೆಯೊಂದುಂಟು.

ದೇವನಹಳ್ಳಿ ತಾಲ್ಲೂಕು ಪೂರ್ವಕಾಲದಲ್ಲಿ ಮಹಾದಂಡಕಾರಣ್ಯದ ಭಾಗವಾದ ಕುಂದಾರಣ್ಯವಾಗಿತ್ತು ಎಂದು ಹೇಳಲಾಗಿದೆ.  ಈ ತಾಲ್ಲೂಕಿನಲ್ಲಿ ಎತ್ತರ ಪ್ರದೇಶಗಳಿಲ್ಲ.  ಸಾಮಾನ್ಯವಾಗಿ ಕುರುಚಲು ಗಿಡಗಳಿಂದ ತುಂಬಿದ ಕಾಡುಗಳಿವೆ.  ಅಲ್ಲಲ್ಲಿ ರಾಜ್ಯ ಕಾಡುಗಳು ಮತ್ತು ಕಾಯ್ದಿಟ್ಟ ಕಾಡುಗಳುಂಟು.

ದೇವನಹಳ್ಳಿ ತಾಲ್ಲೂಕಿನ ಸರಾಸರಿ ಉಷ್ಣತೆ ಅತ್ಯುಷ್ಣ ತಿಂಗಳಲ್ಲಿ 27.50 ಅ ಮತ್ತು ಅತ್ಯಂತ ಚಳಿಯ ತಿಂಗಳಿನಲ್ಲಿ 20.50 ಅ. ದಿನದ ಗರಿಷ್ಠ ಉಷ್ಣತೆ 380 ಅ, ಕನಿಷ್ಠ 100 ಅ. ಸರಾಸರಿ ದೈನಂದಿನ ಗರಿಷ್ಠ ಉಷ್ಣತೆ ಏಪ್ರಿಲ್‍ನಲ್ಲಿ 34.20 ಅ ಮತ್ತು ಕನಿಷ್ಟ ಉಷ್ಣತೆ ಡಿಸೆಂಬರಿನಲ್ಲಿ 14.50 ಅ.  ದೈನಿಕ ಉಷ್ಣತೆಗಳ ಅಂತರ ಮಾರ್ಚ್‍ನಲ್ಲಿ ಗರಿಷ್ಠ, ಜುಲೈ ತಿಂಗಳಲ್ಲಿ ಕನಿಷ್ಠ. ಗರಿಷ್ಠ ಅಂತರ 200 ಅ. ವಾತಾವರಣ ಅತಿ ಆದ್ರ್ರವೂ ಅಲ್ಲ, ಅತಿ ಶುಷ್ಕವೂ ಅಲ್ಲ.  ಸಾಪೇಕ್ಷ ಆದ್ರ್ರತೆ ಮಳೆಗಾಲದಲ್ಲಿ 86% , ಶುಷ್ಕ ತಿಂಗಳುಗಳಲ್ಲಿ 63%.

ತಾಲ್ಲೂಕಿನ ಸರಾಸರಿ ವಾರ್ಷಿಕ ಮಳೆ 701.50  ಮಿ.ಮೀ.  ದೇವನಹಳ್ಳಿಯಲ್ಲಿ 701 . 71 ಮಿ ಮೀ., ಚಿಕ್ಕಜಾಲದಲ್ಲಿ  701 ಮಿ ಮೀ., ವಿಜಯಪುರದಲ್ಲಿ 880 ಮಿ ಮೀ., ಮಳೆ ಆಗುತ್ತದೆ.  ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ.  ಡಿಸೆಂಬರಿನಿಂದ ಮಾರ್ಚ್ ವರೆಗೆ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ ಮಳೆ.  ಫೆಬ್ರುವರಿ ಅತ್ಯಂತ ಶುಷ್ಕ ತಿಂಗಳು ಮತ್ತು ಸೆಪ್ಟೆಂಬರ್ ಅತ್ಯಧಿಕ ಮಳೆಯ ತಿಂಗಳು.
ಈ ತಾಲ್ಲೂಕಿನಲ್ಲಿ ಖುಷ್ಕಿ ಬೆಳೆಗಳು ಮುಖ್ಯ.  ರಾಗಿ ಪ್ರಮುಖ ಆಹಾರ ಬೆಳೆ.  ಜೋಳ, ಅವರೆ, ಕಡಲೆ, ಎಣ್ಣೆಕಾಳು ಉಳಿದ ಬೆಳೆಗಳು.  ನೀರಾವರಿ ಜಮೀನಿನಲ್ಲಿ ತರಕಾರಿ ಅತ್ಯಂತ ಮಹತ್ತ್ವದ ವ್ಯಾಪಾರಿ ಬೆಳೆ.  ಆಲೂಗೆಡ್ಡೆ, ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಲೆಟ್ಯೂಸ್ ಸೊಪ್ಪು, ಬಟಾಣಿ, ಈರುಳ್ಳಿ, ಗಜ್ಜರಿ, ಕೆಂಪು ಮೂಲಂಗಿ, ಮೊದಲಾದವು ಮುಖ್ಯ ತರಕಾರಿ ಬೆಳೆಗಳು.  ಅಲ್ಲದೆ ಅಲ್ಲಲ್ಲಿ ಕಬ್ಬು, ಬಾಳೆ ಮತ್ತು ಗೋವಿನ ಜೋಳ ಬೆಳೆಯುತ್ತಾರೆ.  ಬತ್ತ, ಉಪ್ಪುನೇರಿಳೆ, ದ್ರಾಕ್ಷಿ ಇತರ ಬೆಳೆಗಳು, ದ್ರಾಕ್ಷಿ ಆವತಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತವೆ.  ದ್ರಾಕ್ಷಿ ಉಪ್ಪುನೇರಿಳೆ ಮತ್ತು ಜೋಳ ಈಗ ಅತ್ಯಂತ ಪ್ರಮುಖ ಬೆಳೆಗಳು.

ದೇವನಹಳ್ಳಿ ತಾಲ್ಲೂಕಿನಲ್ಲಿ ದೇವನಹಳ್ಳಿ ಮತ್ತು ವಿಜಯಪುರ ಎಂಬ ಎರಡು ಪಟ್ಟಣಗಳು ಮತ್ತು 277 ಗ್ರಾಮಗಳಿವೆ.  ಹುಣಸಮಾರನಹಳ್ಳಿ, ಬಾಗಲೂರು, ಮಾರೇನಹಳ್ಳಿ, ಬೂದಿಗೆರೆ, ಕೊಡಿಗೇನಹಳ್ಳಿ, ಚಿಕ್ಕಜಾಲ, ಉತ್ತನಹಳ್ಳಿ, ಗಂಗಾವರ, ಚೌಡಪ್ಪನಹಳ್ಳಿ, ಮೈಲನಹಳ್ಳಿ, ಎಲಿಯೂರು, ಕೋರಮಂಗಲ, ಆವತಿ, ಹಾರೋಹಳ್ಳಿ, ಬಿಜ್ಜವಾರ, ಕಾರಹಳ್ಳಿ, ಕೊಯಿರ, ವಿಶ್ವನಾಥಪುರ, ನವರತ್ನ, ಅರದೇಶನಹಳ್ಳಿ ಮತ್ತು ಬೆಟ್ಟಹಲಸೂರು ಇವು ಮುಖ್ಯ ಗ್ರಾಮಗಳು.  ಕೊಯಿರ ಗ್ರಾಮ ಕಲ್ಲುಚಪ್ಪಡಿಗಾಗಿ, ವಿಜಯಪುರ ಮತ್ತು ಬಾಗಲೂರು ರೇಷ್ಮೆ ಕೈಗಾರಿಕೆಗಾಗಿ ಹೆಸರಾದ ಸ್ಥಳಗಳು.  ವಿಜಯಪುರ (ವಡಿಗೇನಹಳ್ಳಿ), ದೇವನಹಳ್ಳಿ ತಾಲ್ಲೂಕಿನ ಮುಖ್ಯ ವ್ಯಾಪಾರ ಕೇಂದ್ರ.  ಈ ತಾಲ್ಲೂಕಿನ ಪೂರ್ವ ಭಾಗದಲ್ಲಿರುವ ನಲ್ಲೂರು ಒಂದು ಇತಿಹಾಸ ಪ್ರಸಿದ್ಧ ಕ್ಷೇತ್ರ.  ಕುಂದಾಣದಲ್ಲಿ 13 ನೆಯ ಶತಮಾನದಲ್ಲಿ ಹೊಯ್ಸಳ ದೊರೆ ರಾಮನಾಥನ ಅರಮನೆಯಿತ್ತು.
ದೊಡ್ಡ ಬಳ್ಳಾಪುರ - ದೇವನಹಳ್ಳಿ - ಶಿಡ್ಲಘಟ್ಟ, ಬೆಂಗಳೂರು - ದೇವನಹಳ್ಳಿ - ನಂದಿದುರ್ಗ, ಬೆಂಗಳೂರು-ದೇವನಹಳ್ಳಿ-ಚಿಕ್ಕಬಳ್ಳಾಪುರ, ನಂದಿದುರ್ಗ-ವಿಜಯಪುರ-ಶಿಡ್ಲಘಟ್ಟ, ಕೊಡಿಗೇನಹಳ್ಳಿ-ಬೂದಿಗೆರೆ-ಬೆಂಗಳೂರು ಮತ್ತು ದೇವನಹಳ್ಳಿ-ಚೆನ್ನರಾಯಪಟ್ಟಣ ರಸ್ತೆಗಳು ಈ ತಾಲ್ಲೂಕಿನ ಮುಖ್ಯ ಭೂಮಾರ್ಗಗಳು.  ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಈ ತಾಲ್ಲೂಕಿನ ಮಧ್ಯದಲ್ಲಿ ಹಾದುಹೋಗುತ್ತದೆ.  ಬೆಂಗಳೂರು-ಚಿಕ್ಕಬಳ್ಳಾಪುರ ರೈಲುಮಾರ್ಗ ಈ ತಾಲ್ಲೂಕಿನ ಮುಖಾಂತರ ಸಾಗುತ್ತದೆ.  ಬೆಟ್ಟಹಲಸೂರು, ದೊಡ್ಡಜಾಲ, ದೇವನಹಳ್ಳಿ, ಆವತಿ ಇವು ರೈಲ್ವೆ ನಿಲ್ದಾಣಗಳು.

ದೇವನಹಳ್ಳಿ ಪಟ್ಟಣ ಬೆಂಗಳೂರಿನಿಂದ 35 ಕಿ.ಮೀ. ಉತ್ತರದಲ್ಲಿ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಂಗಳೂರು-ಚಿಕ್ಕಬಳ್ಳಾಪುರ ರೈಲುಮಾರ್ಗದಲ್ಲಿ ಉ.ಅ. 13015'  ಮತ್ತು ಪೂ. ರೇ. 77044'  ಮೇಲೆ ಇದೆ.  ಸಮುದ್ರ ಮಟ್ಟದಿಂದ ಇದರ ಎತ್ತರ 899 ಮೀ. 

ದೇವನಹಳ್ಳಿಯ ಸರಾಸರಿ ದೈನಿಕ ಉಷ್ಣತೆ 23.40 ಅ, ಗರಿಷ್ಟ ಉಷ್ಣತೆ 36.90 ಅ,  ಕನಿಷ್ಠ 11.70 ಅ.  ಡಿಸೆಂಬರಿನಿಂದ ಫೆಬ್ರುವರಿ ವರೆಗೆ ಚಳಿಗಾಲ. ತರುವಾಯ ಉಷ್ಣತೆ ಏರುತ್ತ ಏಪ್ರಿಲಿನಲ್ಲಿ ಗರಿಷ್ಠವಾಗುತ್ತದೆ. ಡಿಸೆಂಬರ್, ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವುದಿಲ್ಲ.  ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‍ಗಳಲ್ಲಿ ವರ್ಷದ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ.  ವಾರ್ಷಿಕ ಸರಾಸರಿ ಮಳೆ 701.70 ಮಿ. ಮೀ.
ದೇವನಹಳ್ಳಿಯ ಮೂಲ ಹೆಸರು ದೇವನದೊಡ್ಡಿ.  ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಬೈರೇಗೌಡ 1501 ರಲ್ಲಿ ಇಲ್ಲಿ ಕೋಟೆಯನ್ನು ಕಟ್ಟಿಸಿದ.  ಅವನು ಹಳ್ಳಿಯ ಯಜಮಾನನಾದ ದೇವಗೌಡನ ಅಪ್ಪಣೆ ಪಡೆದುಕೊಂಡು ಹೊಸ ಗ್ರಾಮವನ್ನು ಕಟ್ಟಿಸಿ ಅದಕ್ಕೆ ದೇವನಹಳ್ಳಿ ಎಂದು ಹೆಸರಿಟ್ಟ.  ಅವನ ವಂಶದವರು 1749 ರ ವರೆಗೆ ಆಳಿದರು.  ಆ ವರ್ಷ ಈ ಗ್ರಾಮ ಮೈಸೂರಿನಿಂದ ನಂಜರಾಜ ಒಡೆಯರ ಅಧೀನಕ್ಕೆ ಬಂತು.  ಈ ಗ್ರಾಮವನ್ನು ವಶಪಡಿಸಿಕೊಳ್ಳುವಾಗ ನಡೆದ ಕಾಳಗದಲ್ಲಿ ಹೈದರ್ ಅಲಿ ಕುದುರೆ ಸವಾರನಾಗಿದ್ದ.  ಅವನ ಮಗ ಟೀಪು 1753 ರಲ್ಲಿ ಇಲ್ಲಿ ಹುಟ್ಟಿದ.  ಕಿಲ್ಲೆಯ ಪಶ್ಚಿಮಕ್ಕೆ ಹೈದರ್‍ನ ಮನೆಯಿದ್ದ ಸ್ಥಳವನ್ನೂ ಅಲ್ಲಿ ಟೀಪು ಹುಟ್ಟಿದ ಎಡೆಯನ್ನೂ ಅಲ್ಲಿಯ ಜನ ತೋರಿಸುತ್ತಾರೆ.  ಹೈದರ್ ಅಲಿ ಅಧಿಕಾರಕ್ಕೆ ಬಂದ ಮೇಲೆ ಹಾಳಾದ ಕೋಟೆಯನ್ನು ತಿರುಗಿ ಕಟ್ಟಿಸಿದ.  1791 ರಲ್ಲಿ ಬ್ರಿಟಿಷರ ಪರವಾಗಿ ಲಾರ್ಡ್ ಕಾರ್ನ್‍ವಾಲಿಸ್ ಇದನ್ನು ವಶಪಡಿಸಿಕೊಂಡ.

ಹೈದರ್ ಅಲಿ ಮತ್ತು ಟೀಪು ಸುಲ್ತಾನರ ಬಗ್ಗೆ ಇಲ್ಲಿ ಅನೇಕ ಕಥೆಗಳನ್ನು ಹೇಳಲಾಗುತ್ತದೆ.  ಹೈದರ್ ಈ ಸ್ಥಳದ ಬ್ರಾಹ್ಮಣ ಪೂರ್ಣಪ್ಪನ ಮನೆಯಲ್ಲಿ ದನ ಕಾಯುವ ಹುಡುಗನಾಗಿದ್ದ.  ಒಮ್ಮೆ ಅವನು ಒಂದು ಗಿಡದ ನೆರಳಿನಲ್ಲಿ ಮಲಗಿದ್ದಾಗ ಏಳು ಹೆಡೆಯ ನಾಗರಹಾವು ಆತನ ತಲೆಯ ಮೇಲೆ ಆಡುತಿದ್ದುದನ್ನು ಅವನ ಯಜಮಾನ ದೂರದಿಂದಲೇ ನೋಡಿದ.  ತರುವಾಯ ಅವನು ಹೈದರನನ್ನು ಮನೆಗೆ ಕರೆದುಕೊಂಡು ಹೋಗಿ ಮೃಷ್ಟಾನ್ನವನ್ನು ಹಾಕಿ ಹೈದರ್ ಒಂದು ದಿನ ದೊಡ್ಡ ರಾಜನಾಗುವನೆಂದು ಹೇಳಿದ.  ಹೈದರ್ ತನ್ನ ಯಜಮಾನನ್ನು ಕೃತಜ್ಞತೆಯಿಂದ ನೆನಪಿಟ್ಟು ಆತನಿಗೆ ಉಚಿತವಾಗಿ ಭೂಮಿಯನ್ನು ಕೊಟ್ಟ.  ಟೀಪು ತನ್ನ ಮಕ್ಕಳನ್ನು ಸ್ವಾಗತಿಸಿದ ಸ್ಥಳ ಇಲ್ಲಿಗೆ ಸಮೀಪದಲ್ಲಿದೆ.  ಅಲ್ಲದೆ ಟೀಪು ದೇವನಹಳ್ಳಿಗೆ ಬೇಟೆ ಮತ್ತು ವಿಹಾರಕ್ಕಾಗಿ ಬರುತ್ತಿದ್ದ.  ಆಗಿನ ಕೋಟೆ ಕೊತ್ತಲಗಳು, ಸುಲ್ತಾನಪೇಟೆ, ಬತೇರಿ, ಪೂರ್ಣಯ್ಯನ ಸರೋವರ, ಮೊದಲಾದವುಗಳ ಅವಶೇಷಗಳಿವೆ.  ತುಂಬ ಹಳೆಯದಾದ ನಂಜುಡೇಶ್ವರ ಗುಡಿ, ದ್ರಾವಿಡ ಶಿಲ್ಪವಾದ ವೇಣುಗೋಪಾಲ ಸ್ವಾಮಿ ಗುಡಿ, ಸಿದ್ಧೇಶ್ವರ ಗುಡಿ, ಸರೋವರಾಂಜನೇಯ ಗುಡಿ ಮತ್ತು ಗಂಗಮ್ಮ ಗುಡಿಗಳಿವೆ.

ಅಂದವಾದ ಗೋಪುರ ಮತ್ತು ಎದುರಿಗೆ ನಾಲ್ಕು ಕಂಬಗಳ ಮಂಟಪವುಳ್ಳ ವೇಣುಗೋಪಾಲಸ್ವಾಮಿ ಗುಡಿ ದ್ರಾವಿಡ ಕಟ್ಟಡ.  ನವರಂಗ ಎಲ್ಲ ಬದಿಗಳಲ್ಲಿ ಚಿತ್ರಗಳನ್ನು ಕೆತ್ತಿದ ನಾಲ್ಕು ಕಪ್ಪು ಕಂಬಗಳ ಆಧಾರದ ಮೇಲೆ ನಿಂತಿದೆ.  ಅವುಗಳಲ್ಲಿ ಸಂಗೀತಗಾರರು, ಶಂಖ ಊದುವವರು, ನೃತ್ಯಗಾರ್ತಿಯರು, ಹಯಗ್ರೀವ , ಶರೀರದ ಕೆಳಭಾಗ ಪಕ್ಷಿಯಂತಿರುವ ಕಿನ್ನರ, ಪಾದದಿಂದ ಮುಳ್ಳನ್ನು ಹೊರತೆಗೆಯುವ ಬೇಟೆಗಾರ್ತಿ - ಈ ಚಿತ್ರಗಳು ಸುಂದರವಾಗಿವೆ.  ಗುಡಿಯ ಎದುರಿಗೆ ದೀಪಸ್ತಂಭವಿದೆ.  ಗುಡಿಯ ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ವಿವರಿಸುವ ಸುಮಾರು 2 ಅಡಿ ಎತ್ತರದ ಪ್ರತಿಮೆಗಳನ್ನು ಕೆತ್ತಲಾಗಿದೆ.  ಕಲಾತ್ಮಕವಾಗಿ ಕೆತ್ತಿದ, ಬಂಗಾರದ ಮುಲಾಮ ಮಾಡಿದ ಮತ್ತು ಬದಿಗಳಲ್ಲಿ ಎರಡು ಹೆಣ್ಣುಮೂರ್ತಿಗಳಿರುವ ಚಿತ್ರಗೋಪುರ ವಾಹನವನ್ನು ಗುಡಿಯೊಳಗಿಡಲಾಗಿದೆ.  ಪ್ರತಿ ವರ್ಷ ಚೈತ್ರ ಮಾಸದ ಪೂರ್ಣಿಮೆಯ ದಿನ ದೊಡ್ಡ ಚಿತ್ರ ಗೋಪುರೋತ್ಸವ ನೆರವೇರುತ್ತದೆ.  ಈ ಉತ್ಸವವನ್ನು ನೋಡಲು ಸಾವಿರಾರು ಜನ ಸೇರುತ್ತಾರೆ.

ವೇಣು ಗೋಪಾಲಸ್ವಾಮಿ ಗುಡಿಯ ಎದುರಿಗೆ ಸಿದ್ಧೇಶ್ವರ ಗುಡಿ ಇದೆ.  ಇದು ವೀರಶೈವ ದೇವಾಲಯ.  ಈ ಗುಡಿಯನ್ನು ಕಲ್ಲಿನಿಂದ ಕಟ್ಟಲಾಗಿದೆ.  ಗುಡಿಯ ಮೇಲ್ಗಡೆ ಎಲ್ಲ ಮೂಲೆಗಳಲ್ಲಿ ಅತ್ಯಂತ ಸುಂದರವಾದ ಬಸವಣ್ಣನ ಮೂರ್ತಿಗಳಿವೆ.  ಗುಡಿಯೊಳಗೆ ಸುಮಾರು ಹನ್ನೊಂದು ಅಡಿ ಎತ್ತರವಾಗಿರುವ, ಎಡಗೈಯಲ್ಲಿ ಲಿಂಗ ಹಿಡಿದು ಬಲಗೈಯಿಂದ ಅದನ್ನು ಪೂಜೆ ಮಾಡುತ್ತಿರುವ ಭಂಗಿಯಲ್ಲಿ ಕುಳಿತಿರುವ ಸಿದ್ಧೇಶ್ವರನ ಮೂರ್ತಿ ಇದೆ.

ಎರಡು ಕೋಣೆ ಮತ್ತು ವರಂಗವಿರುವ ನಂಜುಂಡೇಶ್ವರ ಗುಡಿ ಪುರಾತನವಾದ್ದು.  ನವರಂಗದ ಎಡಭಾಗದಲ್ಲಿ ನಾರಾಯಣ, ತಕ್ಷಕ, ನಾಗಮಾತಾ, ಕಾರ್ಕೋಟಕ, ಬ್ರಹ್ಮ, ಸರಸ್ವತಿ ಮತ್ತು ಸುಬ್ರಹ್ಮಣ್ಯ ಮೂರ್ತಿಗಳಿವೆ.

ಸರೋವರವೆಂದು ಕರೆಯುವ ದೊಡ್ಡಕೆರೆಯನ್ನು ದಿವಾನ ಪೂರ್ಣಯ್ಯ ಕಟ್ಟಿಸಿದನೆಂದು ಹೇಳಲಾಗಿದೆ.  ಅದರ ಸಮೀಪದಲ್ಲಿರುವ ಗುಡಿಯಲ್ಲಿಯ ಆಂಜನೇಯನಿಗೆ ಸರೋವರಾಂಜನೇಯನೆಂದು ಹೆಸರು.  ಮೀನುಗಾರರಿಗೆ ಸಂಬಂಧಿಸಿದ ಗಂಗಮ್ಮನ ಗುಡಿಯಲ್ಲಿ ತ್ರಿಶೂಲ, ಡಮರುಗ, ಕತ್ತಿ, ಮತ್ತು ಪಾತ್ರೆಯನ್ನು ಹಿಡಿದಿರುವ ನಾಲ್ಕು ಕೈಗಳುಳ್ಳ ಮತ್ತು ರಾಕ್ಷಸನನ್ನು ತುಳಿದು ನಿಂತಿರುವ 5 ಅಡಿ ಎತ್ತರದ ನಗೆಮುಖದ ದೇವತೆಯ ಮೂರ್ತಿ ಇದೆ.

ದೇವನಹಳ್ಳಿ ಶಿಲ್ಪಕಲಾಶಾಲೆ ಪ್ರಸಿದ್ಧವಾದದು. ಹಾಳಾದ ಕೋಟೆ ಮತ್ತು  ದೇವಾಲಯಗಳನ್ನು ಕಟ್ಟಲು ದೇವೇಗೌಡ ಮಧುರೆಯಿಂದ ಕರೆದುಕೊಂಡು ಬಂದ ಶಿಲ್ಪಕಲಾ ಸಿದ್ಧಾಂತಿ ವೇದಾಂತ ಗೋಪಾಲಾಚಾರ್ಯ ಮತ್ತು ಅವನ ಸಹೋದರ ರಾಮಾಚಾರ್ಯ ಈ ಶಿಲ್ಪಕಲಾ ಶಾಲೆಯ ಆದ್ಯಪ್ರವರ್ತಕರು.  ಕೋಟೆಯನ್ನು ಕಟ್ಟಿ ಮುಗಿಸಿದ ಮೇಲೆ ವೇಣುಗೋಪಾಲಸ್ವಾಮಿ ಗುಡಿಯನ್ನು ಇವರೇ ಕಟ್ಟಿದರು. ಅಲ್ಲಿಯ ವಿಗ್ರಹಗಳನ್ನೂ ಇವರೇ ಮಾಡಿದರು. ಈ ವಂಶದವರಾದ ಎ.ಸಿ.ಎಚ್. ಆಚಾರ್ಯರು ಈ ಶಿಲ್ಪಕಲಾಶಾಲೆಯನ್ನು ಈಗ ನಡೆಸುತ್ತಿದ್ದಾರೆ. ಇಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳು ಶಿಲ್ಪಕಲಾ ಶಿಕ್ಷಣ ಪಡೆದುಕೊಂಡು ಹೋಗಿದ್ದಾರೆ.  ಶಿಲ್ಪಕಲೆ, ರೇಖಾಚಿತ್ರ ಹಾಗೂ ವರ್ಣಚಿತ್ರ ಕಲಿಯುವ ವಿದ್ಯಾರ್ಥಿಗಳಿದ್ದಾರೆ.  ಶಾಲೆಯ ಪ್ರದರ್ಶನ ಕೋಣೆಯಲ್ಲಿ ಪಾಶ್ರ್ವನಾಥ, ಜವಾಹರ, ವಿಶ್ವೇಶ್ವರಯ್ಯ, ರವೀಂದ್ರನಾಥ ಠಾಕೂರ್, ನಟರಾಜ, ಅಜಂತ ನರ್ತಕಿಯರು ಮೊದಲಾದ ಪ್ರತಿಮೆಗಳಿವೆ. ಸುಮಾರು 5 ಅಡಿ ಎತ್ತರವಾಗಿರುವ  ಬುದ್ದ ಮತ್ತು ವಿವೇಕಾನಂದ ಮೂರ್ತಿಗಳು ಸುಂದರವಾಗಿವೆ. ಅಲ್ಲದೆ ಕೆಲವು ಕಂಚಿನ ಕೃತಿಗಳುಂಟು.  ಶಿಲ್ಪಕಲಾಶಾಲೆಯ ವಠಾರದಲ್ಲಿ ನೂರಾರು ಭಗ್ನ ಶಿಲಾಮೂರ್ತಿಗಳಿವೆ.  ಈ ಶಿಲ್ಪಕಲಾ ಶಾಲೆಯನ್ನು ಒಳಹೊಕ್ಕು ನೋಡುವ ಪ್ರೇಕ್ಷಕನಿಗೆ ನಾಡಿನ ಮತ್ತು ದೇವನಹಳ್ಳಿಯ ಇತಿಹಾಸ ಕಣ್ಣಮುಂದೆ ನಿಲ್ಲುತ್ತದೆ.
ದೇವನಹಳ್ಳಿಯ ಪಟ್ಟಣದ ಜನಸಂಖ್ಯೆ 23,190 (2001). ಕನ್ನಡ ಮುಖ್ಯ ಭಾಷೆ. ತೆಲಗು ಮತ್ತು ಉರ್ದು ಉಳಿದ ಭಾಷೆಗಳು. ಈ ಪಟ್ಟಣದಲ್ಲಿ 2,004 ವಾಸದ ಮನೆಗಳು ಮತ್ತು 2,150 ಕುಟುಂಬಗಳಿವೆ. ಈ ಪಟ್ಟಣದ ವಿಸ್ತೀರ್ಣ 4.4 ಚ.ಕಿ.ಮೀ.

ದೇವನಹಳ್ಳಿಯಲ್ಲಿ 1870ರಿಂದ ಪುರಸಭೆ ಇದೆ. 6 ಪ್ರಾಥಮಿಕ ಶಾಲೆಗಳು. ಮಾಧ್ಯಮಿಕ ಶಾಲೆ. ನಾಟಕಾಲಯ. ಜಿಲ್ಲಾ ಕೇಂದ್ರ ಗ್ರಂಥಾಲಯ, ಅಂಚೆ ಮತ್ತು ದೂರವಾಣಿ ಕಚೇರಿ. ಆರಕ್ಷಕರ ಠಾಣೆ, ಪ್ರವಾಸಿ ಮಂದಿರ. ಲೋಕೋಪಯೋಗಿ ಕಾರ್ಯವಿಭಾಗ, ಸರ್ಕಾರಿ ಆಸ್ಪತ್ರೆ, ಪಶು ವೈದ್ಯಶಾಲೆ, ರೇಷ್ಮೆ ಕಾರ್ಖಾನೆ, ಹಿಟ್ಟಿನ ಮತ್ತು ಬತ್ತದ ಗಿರಣಿಗಳು, ಸಬ್‍ರಿಜಿಸ್ಟ್ರಾರರ ಕಚೇರಿ, ರೇಷ್ಮೆ ವ್ಯವಸಾಯ ಕಚೇರಿ, ತೋಟಗಾರಿಕೆ ಕಚೇರಿ, ಬ್ಯಾಂಕುಗಳು, ಕೃಷಿ ಪತ್ತಿನ ಸಂಘಗಳು, 2 ಕೃಷೀತರ ಸಹಕಾರ ಸಂಘಗಳು ಇವೆ. ರಕ್ಷಿತ ನೀರು ಸರಬರಾಜು ವ್ಯವಸ್ಥೆ, ವಿದ್ಯುದ್ದೀಪ ಮೊದಲಾದ ಸೌಕರ್ಯಗಳಿವೆ.

ಪ್ರತಿ ಬುಧವಾರ ಇಲ್ಲಿ ದೊಡ್ಡ ಸಂತೆ ನೆರೆಯುತ್ತದೆ. ರಾಗಿ, ತರಕಾರಿ ಅಡಿಕೆ ಮತ್ತು ರೇಷ್ಮೆ ಬಟ್ಟೆಗಳ ವ್ಯಾಪಾರಕ್ಕಾಗಿ ಇದು ಪ್ರಸಿದ್ಧ.  ಇದು ತಾಲ್ಲೂಕು ಸ್ಥಳವಾಗಿರುವುದರಿಂದಲೂ ರೈಲುಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೇಲಿರುವುದರಿಂದಲೂ ಸುತ್ತಲೂ ಫಲವತ್ತಾದ ನೆಲವೂ ಹಲವಾರು ಹಳ್ಳಗಳಿಗೂ ಇರುವುದರಿಂದ ಇದೊಂದು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಇದರ ಹತ್ತಿರ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಚನೆಯಾಗುತ್ತಿದೆ.
(ಎಸ್.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ